ವೆಂಕಟಪತಿ 2

	ವಿಜಯನಗರದ ಆರವೀಡು ವಂಶದ ರಾಜ (1632-42). ಪೆದ್ದವೆಂಕಟ ಎಂಬ ಹೆಸರನ್ನೂ ಹೊಂದಿದ್ದ ಈತ ಅಳಿಯ ರಾಮರಾಯನ ಮೊಮ್ಮಗ. ಶ್ರೀರಂಗನ ಮಗ. 1632ರವರೆಗೆ ಆಳಿದ ಮುಮ್ಮಡಿ ಶ್ರೀರಂಗನ ಮಗ ರಾಮದೇವನ ಮರಣದ ಅನಂತರ ಮತ್ತೊಮ್ಮೆ ಸಿಂಹಾಸನಕ್ಕಾಗಿ ನಡೆದ ಯಾದವೀಕಲಹಗಳಲ್ಲಿ ಈತನೂ ಒಬ್ಬ ಸ್ಪರ್ಧಿಯಾಗಿದ್ದ. ರಾಮದೇವನ ಚಿಕ್ಕಪ್ಪನಾದ ತಿಮ್ಮ ಮತ್ತು ಕಂದನವೋಲಿನ ಗೋಪಾಲರಾಜನ ದತ್ತು ಮಗ ಶ್ರೀರಂಗ ಇನ್ನಿಬ್ಬರು ಸ್ಪರ್ಧಿಗಳು. ಅಂತಿಮವಾಗಿ ಸಿಂಹಾಸನವನ್ನೇರಿದ ಇಮ್ಮಡಿ ವೆಂಕಟಪತಿ ಆಂತರಿಕ ದಂಗೆಗಳನ್ನು ಎದುರಿಸಬೇಕಾಯಿತು. ಬಿಜಾಪುರದ ರಣದುಲ್ಲಾಖಾನನ ದಾಳಿಯ ಪರಿಣಾಮವಾಗಿ ಇಕ್ಕೇರಿ ಕಣ್ಮರೆಯಾಯಿತು. ಬೆಂಗಳೂರನ್ನು ಕೆಂಪೇಗೌಡನಿಂದ ಕಸಿದು ಶಿವಾಜಿಯ ತಂದೆ ಶಹಾಜಿಯನ್ನು ಅಲ್ಲಿನ ಅಧಿಕಾರಿಯಾಗಿ ನೇಮಿಸಲಾಯಿತು. ರಣದುಲ್ಲಾಖಾ ನನನ್ನು ಮೈಸೂರಿನ ಕಂಠೀರವ ನರಸರಾಜ ಒಡೆಯ ಹಿಮ್ಮೆಟ್ಟಿಸಿದರೂ ಪೂರ್ಣವಾಗಿ ಹತ್ತಿಕ್ಕಲಾಗಲಿಲ್ಲ. ಈ ವೇಳೆಗೆ ವೆಂಕಟನ ರಾಜಧಾನಿ ವೆಲ್ಲೂರಿಗೆ ಬದಲಾಗಿದ್ದು, ಅದನ್ನು ಅಲ್ಲಿನ ಈತನ ಸಾಮಂತರು ರಕ್ಷಿಸಿದರು. ಆದರೂ ವಿಜಯನಗರದ ಪತನವನ್ನು ಈತ ತಡೆಯಲಾಗದೆ ಹೋದ.					
(ಜಿ.ಬಿ.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ